ಮನಸ್ಸಿನ ನಿಯಂತ್ರಣದಿಂದ ಉನ್ನತ ಯಶಸ್ಸು ಸಾಧ್ಯ: ಜಿಲ್ಲಾಧಿಕಾರಿ ಡಾ. ಎಂ.ಆರ್.ರವಿ

ವರದಿ: ಅಮರೇಶ ಕಾಮನಕೇರಿ


  ಜೀಲ್ಲಾ ಸುದ್ದಿಗಳು


ಅಂಬಿಗ ನ್ಯೂಸ್ ಟಿವಿ ಡೆಸ್ಕ

      ಚಾಮರಾಜನಗರ  :  ವಿದ್ಯಾರ್ಥಿಗಳು ಮನಸ್ಸಿನ ಗುಲಾಮರಾಗದೇ ಅದನ್ನು  ನಿಯಂತ್ರಿಸುವ ಸಾಮಥ್ರ್ಯ ಬೆಳೆಸಿಕೊಂಡರೆ ಉನ್ನತ ಯಶಸ್ಸು ಸಾಧಿಸಲು ಸಾಧ್ಯವಾಗುತ್ತದೆ ಎಂದು ಜಿಲ್ಲಾಧಿಕಾರಿ ಡಾ. ಎಂ.ಆರ್. ರವಿ ಅವರು ಅಭಿಪ್ರಾಯಪಟ್ಟರು.

ನಗರದ ಸಂತ ಪೌಲರ ಪ್ರೌಢಶಾಲೆಯಲ್ಲಿಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಎಸ್.ಎಸ್.ಎಲ್.ಸಿ ನಿಧಾನಗತಿ ಕಲಿಕಾ ವಿದ್ಯಾರ್ಥಿಗಳಿಗೆ ಏರ್ಪಡಿಸಲಾಗಿದ್ದ ಅಪ್ತ ಸಮಾಲೋಚನೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಜನ್ಮತ: ಎಲ್ಲಾ ಮಾನವ ಜೀವಿಗಳು ಸಮಾನವಾಗಿದ್ದಾರೆ. ಆದರೆ ಬೆಳವಣಿಗೆಯ ಹಂತದಲ್ಲಿ ವ್ಯಕ್ತಿ ಬೆಳೆಯುವ ಪರಿಸರ, ಶ್ರಮ, ಸಾಧನೆಯಲ್ಲಿ ಪರಸ್ಪರ ಭಿನ್ನತೆ ಸೃಷ್ಠಿಯಾಗುತ್ತದೆ. ಇದನ್ನು ದೂರ ಮಾಡಿ ಸಾಧನೆ ಮಾಡಲು ಯಾವುದೇ ಸಮಸ್ಯೆಗಳಿಗೆ ಅಂಜಬಾರದು. ಛಲದಿಂದ ಮುನ್ನುಗ್ಗಬೇಕು. ಅಂಜಿಕೆ, ಭಯ, ಕೀಳರಿಮೆ ಸವಾರಿ ಮಾಡದಂತೆ ಮನಸ್ಸಿಗೆ ಲಗಾಮು ಹಾಕಬೇಕು ಎಂದು ಜಿಲ್ಲಾಧಿಕಾರಿ ಸಲಹೆ ಮಾಡಿದರು.

ನಮ್ಮ ಬದುಕಿಗೆ ನಾವೇ ಶಿಲ್ಪಿ. ನಮ್ಮ ಮನಸ್ಸಿಗೆ ನಾವೇ ಅಧಿಪತಿಯಾಗಬೇಕು. ಬಲವಂತದಿಂದ ಜೀವನ ರೂಪಿಸಲಾಗದು. ಸ್ವಯಂ ಪ್ರೇರಣೆಯಿಂದ ಮಾತ್ರ ಯಶಸ್ಸು ಸಾಧ್ಯ. ಕಲಿಕೆಯಲ್ಲಿರುವ ಸಮಸ್ಯೆಗಳನ್ನು ಗುರುತಿಸಿಕೊಂಡು ಅವುಗಳಿಗೆ ದೊರಕಿಸಿಕೊಂಡರೆ ಶೈಕ್ಷಣಿಕ ಪ್ರಗತಿ ಸಾಧಿಸಬಹುದು. ಸಮಸ್ಯೆಗಳ ಪರಿಹಾರಕ್ಕಾಗಿ ಹಾಗೂ ಪರೀಕ್ಷೆ ಎದುರಿಸುವಲ್ಲಿನ ಭಯ ನಿವಾರಣೆಗಾಗಿ ಮನೋವೈದ್ಯರ ಅಪ್ತ ಸಮಾಲೋಚನೆ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ವಿದ್ಯಾರ್ಥಿಗಳು ಇದರ ಸದುಪಯೋಗ ಮಾಡಿಕೊಳ್ಳಬೇಕೆಂದು ಜಿಲ್ಲಾಧಿಕಾರಿ ರವಿ ಅವರು ಕಿವಿಮಾತು ಹೇಳಿದರು.

ಓದಿದ್ದನ್ನು ನೆನಪಿಟ್ಟುಕೊಳ್ಳಲು ಅಂತರ್ಗತ ಮಾಡಿಕೊಳ್ಳಲು ಅವಶ್ಯವಾದ ತಂತ್ರಗಳನ್ನು ರೂಢಿಸಿಕೊಳ್ಳಬೇಕು. ಧ್ಯಾನ, ಯೋಗಭ್ಯಾಸ, ಸ್ನೇಹಿತರೊಂದಿಗೆ ಚರ್ಚಿಸುವಿಕೆ, ಅಧ್ಯಯನ ಮಾಡಿದ್ದನ್ನು ಬರೆಯುವುದು ಮುಂತಾದ ಚಟುವಟಿಕೆಗಳನ್ನು ಮಾಡಬೇಕು. ಈ ಎಲ್ಲವೂ ಶಿಕ್ಷಣದ ಪ್ರಗತಿಗೆ ಪೂರಕವಾಗಲಿದೆ ಎಂದು ಜಿಲ್ಲಾಧಿಕಾರಿಯವರು ತಿಳಿಸಿದರು.

ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಎಸ್.ಟಿ. ಜವರೇಗೌಡ, ಕ್ಷೇತ್ರ ಶಿಕ್ಷಣಾಧಿಕಾರಿ ಎನ್. ಲಕ್ಷ್ಮೀಪತಿ, ಮನೋವೈದ್ಯರಾದ ಡಾ. ಭರತ್, ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿ ಸಿದ್ದರಾಜು, ಶಿಕ್ಷಣ ಸಂಯೋಜಕರಾದ ಸಿದ್ದಮಲ್ಲಪ್ಪ, ನಿರಂಜನ್‍ಕುಮಾರ್, ದೈಹಿಕ ಶಿಕ್ಷಣ ಪರಿವೀಕ್ಷಕರಾದ ಶಂಕರ್, ಸಂತ ಪೌಲರ ಪ್ರೌಢಶಾಲೆಯ ಮುಖ್ಯ ಶಿಕ್ಷಕರಾದ ಕುಳಂದೈಸ್ವಾಮಿ, ಬಿ.ಆರ್.ಪಿ. ರೇವಣ್ಣ ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Be the first to comment

Leave a Reply

Your email address will not be published.


*