ಯತ್ನಾಳ ಆಗ್ತಾರಾ ಪ್ರತಿಪಕ್ಷದ ನಾಯಕ? ಅಥವಾ ಬಿಜೆಪಿ ರಾಜ್ಯಾಧ್ಯಕ್ಷ? ಹೈಕಮಾಂಡ್ ನಲ್ಲಿ ನಡೆದಿದೆ ಚಿಂತನೆ

ವರದಿ: ಅಂಬಿಗ ನ್ಯೂಸ್ ತಂಡ

ವಿಜಯಪುರ: ಮಾತುಗಳ ಮೂಲಕವೇ ಎದುರಾಳಿಗಳನ್ನು ಸಮರ್ಥವಾಗಿ ಎದುರಿಸಿ ಕಟ್ಟಿಹಾಕುವ ಸಾಮರ್ಥ್ಯ ಹೊಂದಿರುವ ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರಿಗೆ ರಾಜ್ಯ ವಿಧಾನ ಸಭೆ ಪ್ರತಿಪಕ್ಷದ ನಾಯಕ ಅಥವಾ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ಒಲಿದು ಬರಲಿದೆ ಎಂದು ಮೂಲಗಳು ತಿಳಿಸಿವೆ.

ಈ ಮುಂಚೆಯಿಂದಲೂ ತಮ್ಮಿಷ್ಟದಂತೆ ಸ್ವಪಕ್ಷದವರಿರಲಿ ಅಥವಾ ಪ್ರತಿಪಕ್ಷದವರೇ ಆಗಿರಲಿ ನೇರವಾಗಿ ತಮ್ಮದೇ ವ್ಯಂಗ್ಯಭರಿತ ಮಾತುಗಳಿಂದ ವಾಗ್ದಾಳಿ ನಡೆಸುವ ಯತ್ನಾಳ ಅವರ ಬಿಜೆಪಿ ಸರಕಾರದಲ್ಲಿ ಸಚಿವ ಸ್ಥಾನದಿಂದ ವಂಚಿತರಾಗಿದ್ದರು. ಆದರೆ, ಈಗ ರಾಜ್ಯದಲ್ಲಿ ಬಿಜೆಪಿ ಅಧಿಕಾರ ಕಳೆದುಕೊಂಡಿದ್ದು, ಕಾಂಗ್ರೆಸ್ ಅಧಿಕಾರಕ್ಕೇರಲಿದೆ.

ಈ ಮಧ್ಯೆಯೇ, ಬಿಜೆಪಿಯಲ್ಲಿ ಹಿರಿಯ ನಾಯಕರಲ್ಲಿ ಬಹುತೇಕರು ಸೋತು ಸುಣ್ಣವಾಗಿದ್ದು, ಪಕ್ಷಕ್ಕೆ ಟಾನಿಕ್ ನೀಡಲು ಮತ್ತು ಹಿಂದುತ್ವ ವಾದವನ್ನು ಮುಂದುವರೆಸಿಕೊಂಡು ಹೋಗಲು ಪಂಚಮಸಾಲಿ ಲಿಂಗಾಯಿತ ಸಮುದಾಯದ ಪ್ರಮುಖ ನಾಯಕ ಬಸನಗೌಡ ಪಾಟೀಲ ಯತ್ನಾಳ ಅವರನ್ನು ವಿಧಾನ ಸಭೆ ಪ್ರತಿಪಕ್ಷದ ನಾಯಕನ ಸ್ಥಾನ ನೀಡುವ ಸಾಧ್ಯೆ ಇದೆ. ಇದರಿಂದ ವಿಧಾನ ಸಭೆಯ ಒಳಗಡೆ ಮತ್ತು ಹೊರಗಡೆ ಆಡಳಿತಾರೂಢ ನಾಯಕರ ವಿರುದ್ಧ ಸಮರ್ಥವಾಗಿ ಬಳಸಿಕೊಂಡು ಪಕ್ಷಕ್ಕೆ ಅನುಕೂಲ ಮಾಡಿಕೊಳ್ಳುವ ನಿಟ್ಟಿನಲ್ಲಿ ಬಿಜೆಪಿ ಹೈಕಮಾಂಡ್ ಯೋಚನೆ ನಡೆಸಿದೆ ಎನ್ನಲಾಗಿದೆ.

ಇದೇ ವೇಳೆ, ಹಿಂದುತ್ವದ ಅಲೆಯನ್ನೇ ಹೆಚ್ಚಾಗಿ ನಂಬಿಕೊಂಡಿರುವ ಬಿಜೆಪಿ ಪಕ್ಷ ಸಂಘಟನೆ ಬಲಗೊಳಿಸಲು ನಿರ್ಧರಿಸಿದರೆ, ಯತ್ನಾಳ ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷರನ್ನಾಗಿ ಮಾಡಲು ಕೂಡ ಚಿಂತನೆ ನಡೆಸಿದೆ. ಒಂದು ವೇಳೆಲಿಂಗಾಯಿತ ಸಮುದಾಯಕ್ಕೆ ಸೇರಿರುವ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ವಿಧಾನ ಸಭೆ ಪ್ರತಿಪಕ್ಷದ ನಾಯಕರನ್ನಾಗಿ ಆಯ್ಕೆ ಮಾಡಿದರೆ, ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ಬೇರೆ ಸಮುದಾಯದವರ ಪಾಲಾಗಲಿದೆ.

ಒಟ್ಟಾರೆ, ಈ ಬಾರಿ ಚುನಾವಣೆಯಲ್ಲಿ ಸ್ಟಾರ್ ಪ್ರಚಾರಕರಾಗಿ ತಮ್ಮ ಸ್ವಂತ ಶಕ್ತಿ ಮತ್ತು ಬಿಜೆಪಿಯ ಕಟ್ಟಾ ಮತಗಳ ಆಧಾರದ ಮೇಲೆ ಬಸವನಾಡು ಬಿಜಾಪುರ ನಗರ ಮತಕ್ಷೇತ್ರದಿಂದ ಸತತ ಎರಡನೇ ಬಾರಿಗೆ ಮತ್ತು ಒಟ್ಟಾರೆ 3ನೇ ಬಾರಿಗೆ ಶಾಸಕರಾಗಿ ಆಯ್ಕೆಯಾಗಿರುವ ಬಸನಗೌಡ ಪಾಟೀಲ ಯತ್ನಾಳ ಅವರಿಗೆ ರಾಜ್ಯ ಬಿಜೆಪಿಯಲ್ಲಿ ಎರಡರಲ್ಲಿ ಒಂದು ಪ್ರಮುಖ ಹುದ್ದೆ ಸಿಗುವುದು ಬಹುತೇಕ ಖಚಿತವಾಗಿದೆ ಎಂದು ಬಿಜೆಪಿ ಉನ್ನತ ಮೂಲಗಳು ತಿಳಿಸಿವೆ.

Be the first to comment

Leave a Reply

Your email address will not be published.


*