ದೇಶದ ಸುದ್ದಿಗಳು
ನವದೆಹಲಿ: ಬುಧವಾರದಂದು ದೆಹಲಿ ಗಲಭೆ ಕುರಿತಂತೆ ಮೂರು ಮಹತ್ವದ ಅರ್ಜಿಗಳ ವಿಚಾರಣೆ ನಡೆಸಿ, ಗಲಭೆಗೆ ಪ್ರಚೋದನೆ ನೀಡುವಂತಹ ಹೇಳಿಕೆ, ಭಾಷಣ ಮಾಡಿದವರ ಮೇಲೆ ಕೂಡಲೇ ಎಫ್‌ಐಆರ್ ದಾಖಲಿಸಿ ಎಂದು ದೆಹಲಿ ಪೊಲೀಸರಿಗೆ ನಿರ್ದೇಶನ ನೀಡಿದ್ದ ದೆಹಲಿ ಹೈಕೋರ್ಟ್ ನ್ಯಾಯಾಧೀಶ ಎಸ್. ಮುರಳೀಧರ್ ಅವರನ್ನು ಬುಧವಾರ ರಾತ್ರಿ ಪಂಜಾಬ್ ಮತ್ತು ಹರ‍್ಯಾಣ ಹೈಕೋರ್ಟಿಗೆ ವರ್ಗಾವಣೆ ಮಾಡಲಾಗಿದೆ.
ಈ ಕುರಿತು ಬುಧವಾರ ರಾತ್ರಿ ರಾಷ್ಟ್ರಪತಿ ಗೆಜೆಟ್ ನೋಟಿಫಿಕೇಷನ್‌ಗೆ ಸಹಿ ಹಾಕಿದ್ದಾರೆ.
ಫೆಬ್ರವರಿ ೧೨ರಂದು ನ್ಯಾಯಾಂಗೀಯ ಕೊಲಿಜಿಯಂ ಅವರ ವರ್ಗಾವಣೆಗೆ ಸೂಚಿಸಿತ್ತು. ಫೆಬ್ರವರಿ ೧೩ರಂದು ದೆಹಲಿ ಬಾರ್ ಅಸೋಷಿಯೇಷನ್‌ನ ವಕೀಲರು ಕೆಲಸಕ್ಕೆ ಹಾಜರಾಗದೇ ಮುರಳೀಧರ್ ವರ್ಗಾವಣೆ ಮಾಡಬಾರದು ಎಂದು ಪ್ರತಿಭಟಿಸಿದ್ದನ್ನು ಇಲ್ಲಿ ಗಮನಿಸಬೇಕು.
ಮಂಗಳವಾರ ರಾತ್ರಿ ತಮ್ಮ ಮನೆಯಲ್ಲೇ ವಿಚಾರಣೆ ನಡೆಸಿದ್ದ ಮುರಳೀಧರ್, ಗಾಯಾಳುಗಳಿಗೆ ಸುಗಮ ದಾರಿ ಕಲ್ಪಿಸಿ ಮತ್ತು ಚಿಕಿತ್ಸೆಯ ವ್ಯವಸ್ಥೆ ಮಾಡಿ ಎಂದು ದೆಹಲಿ ಪೊಲೀಸರಿಗೆ ಆದೇಶಿಸಿದ್ದರು.
ಬುಧವಾರ ವಿಚಾರಣೆ ಮುಂದುವರೆಸಿದ್ದ ಅವರು, ಪ್ರಚೋದನಾಕಾರಿ ಭಾಷಣ ಮಾಡಿದ, ಹೇಳಿಕೆ ನೀಡಿದ ನಾಯಕರ ಮೇಲೆ ಪೊಲೀಸರು ಕ್ರಮ ಕೈಗೊಂಡಿದ್ದರೆ ದೆಹಲಿಯ ಶಾಂತಿ ಕದಡುತ್ತಿರಲಿಲ್ಲ.
ಕೂಡಲೇ ಅಂತಹ ನಾಯಕರ ಮೇಲೆ ಎಫ್‌ಐಆರ್ ಹಾಕಿ ಎಂದು ದೆಹಲಿ ಪೊಲೀಸರಿಗೆ ನಿರ್ದೇಶನ ನೀಡಿದ್ದರು.
ದೆಹಲಿ ಗಲಭೆ ಒಂದು ವ್ಯವಸ್ಥಿತ ಪಿತೂರಿಯಂತೆ ಭಾಸವಾಗುತ್ತಿದೆ ಎಂದಿದ್ದ ಅವರು, ೧೯೮೪ರ ಸಿಖ್ ಹತ್ಯಾಕಾಂಡಕ್ಕೆ ಇದನ್ನು ಹೋಲಿಸಿ, ಅಂತಹ ಭೀಕರ ಹತ್ಯಾಕಾಂಡ ಆಗುವ ಮೊದಲು ಎಚ್ಚೆತ್ತುಗೊಳ್ಳಿ ಎಂದು ಪೊಲೀಸರಿಗೆ ಕಟುವಾಗಿ ಸೂಚನೆ ನೀಡಿದ್ದರು.
Be the first to comment