ಕೋಟೆಕಲ್ ಗ್ರಾಮದ ಬೆಟ್ಟದ ನಡುವೆ ಜಲವೈಭವ: ಕೈ ಬೀಸಿ ಕರೆಯುತ್ತಿದೆ ಮಿನಿ ಫಾಲ್ಸ್

ವರದಿ: ಶರಣಪ್ಪ ಹೆಳವರ ಬಾಗಲಕೋಟೆ

ಜಿಲ್ಲಾ ಸುದ್ದಿಗಳು

ಪ್ರಕೃತಿಯ ಐಸಿರಿಯೇ ಹಾಗೆ, ಮನಸೋಲದವರೇ ಇಲ್ಲ. ಅದರಲ್ಲೂ ಮಳೆಗಾಲದಲ್ಲಿ ಗುಡ್ಡಗಾಡು ಪ್ರದೇಶಗಳು, ಜಲಪಾತಗಳು, ನದಿಗಳು ಮೈತುಂಬಿ ತಮ್ಮ ಸೌಂದರ್ಯವನ್ನು ಇಮ್ಮಡಿಗೊಳಿಕೊಳ್ಳುತ್ತವೆ. ಅದರಲ್ಲೂ ಮುಂಗಾರು ಮಳೆಯ ಸಿಂಚನದಿಂದ ಕೋಟೆಕಲ್ ಜಲಪಾತ ನಿಸರ್ಗ ಮಾತೆಯ ನೈಜ ಸೊಬಗನ್ನು ಅನಾವರಣಗೊಳಿಸಿದೆ. ಬೆಟ್ಟ-ಗುಡ್ಡಗಳ ಸಾಲು. ಎಡೆಬಿಡದೆ ಸುರಿಯುತ್ತಿರುವ ಮಳೆಗೆ ಹಸಿರ ಬೆಟ್ಟಗಳ ಸಾಲಿನಿಂದ ಧುಮ್ಮಿಕ್ಕಿ ಹರಿಯುವ ಜಲಧಾರೆ ನೋಡುಗರನ್ನು ತಣಿಸಿದೆ.

 

ಬಾಗಲಕೋಟೆ:ಬೆಟ್ಟವನ್ನು ಸೀಳಿಕೊಂಡು ಬೋರ್ಗರೆಯುತ್ತಿರುವ ಜಲಲಲ ಜಲಧಾರೆ.ತಕಥೈ ತಕಥೈ ಎಂದು ಎತ್ತರದಿಂದ ಬೀಳುವ ನೀರಿನ ನರ್ತನ. ದುಮ್ಮಿಕ್ಕುವ ಜಲಪಾತಕ್ಕೆ ಮೈಯೊಡ್ಡಿ ಕೇಕೆ ಹಾಕಿ ಸಂಭ್ರಮಿಸುತ್ತಿರುವ ಯುವಕರು, ಯುವತಿಯರು.ಹೌದು, ಇದು ಬಾಗಲಕೋಟೆ ಜಿಲ್ಲೆ ಗುಳೇದಗುಡ್ಡ ತಾಲ್ಲೂಕಿನ ಕೋಟೆಕಲ್ ಪಾಲ್ಸ್, ಇದನ್ನು ಈ ಭಾಗದಲ್ಲಿ ದಿಡುಗು ಅಂತ ಕೂಡ ಕರೆಯುತ್ತಾರೆ. ಕಿರುಜಲಪಾತದ ವೈಭವ ಜೋಗ ಜಲಪಾತ, ಗೋಕಾಕ್ ಪಾಲ್ಸ್ ಗಿಂತ ತಾನೇನು ಕಡಿಮೆ ಎನ್ನುವಂತೆ ನೃತ್ಯಗೈಯುತ್ತಿದೆ. ಸದ್ಯ ಜನರನ್ನು ಕೈ ಮಾಡಿ ಕರೆಯುತ್ತಿದೆ. ಕೋಟೆಕಲ್ ಗ್ರಾಮಕ್ಕೆ ಹೊಂದಿಕೊಂಡ ಬೆಟ್ಟದಲ್ಲಿ ಈಗ ಧುಮ್ಮಿಕ್ಕಿ ಹರಿಯುವ ಜಲಪಾತದ ಕಲರವ ನಾದನಿನಾದ ಎಲ್ಲರನ್ನು ಆಕರ್ಷಿಸುತ್ತಿದೆ.

ಸುಮಾರು ಐವತ್ತು ಅಡಿ ಎತ್ತರದಿಂದ ಬೀಳುವ ಜಲಪಾತ ವೀಕ್ಷಿಸಲು ಯುವಕರು, ಮಹಿಳೆಯರು, ಕಾಲೇಜ್ ವಿದ್ಯಾರ್ಥಿಗಳು ತಂಡೋಪತಂಡವಾಗಿ ಬರುತ್ತಿದ್ದಾರೆ. ಬೆಟ್ಟಗಳ ಮಧ್ಯದಲ್ಲಿನ ಜಲಧಾರೆಯನ್ನು ಕಂಡು ಅದರಲ್ಲಿ ಮಿಂದೇಳುತ್ತಾ ಹರ್ಷಪಡುತ್ತಿದ್ದಾರೆ. ಪ್ರತಿದಿನವೂ ಇಲ್ಲಿ ಪ್ರವಾಸಿಗರ ದಂಡು ಹರಿದು ಬರುತ್ತಿದೆ. ಇನ್ನು ವೀಕೆಂಡ್ ಸಂದರ್ಭದಲ್ಲಿ ಜಲಧಾರೆ ವೀಕ್ಷಣೆಗೆ ಬರುವವರ ಸಂಖ್ಯೆ ಇನ್ನು ಹೆಚ್ಚಾಗಿರುತ್ತದೆ. ಜಲಪಾತ ವೀಕ್ಷಿಸಲು ಬಹಳ ಸಂತೋಷ ಆಗಿದೆ.ಎಲ್ಲರೂ ಬಂದೂ ಎಂಜಾಯ್ ಮಾಡುತ್ತಿದ್ದಾರೆ.

Be the first to comment

Leave a Reply

Your email address will not be published.


*