ಅಂಬಿಗರ ಚೌಡಯ್ಯ ಜಯಂತಿ:ಬಂಡಾಯ ಸಾಹಿತ್ಯದ ಮೊದಲ ಗುರು ನಿಜಶರಣ

ವರದಿ: ಅಮರೇಶ ಕಾಮನಕೇರಿ


ನಿಜಶರಣ ಜಯಂತೋತ್ಸವ 20-01-2020


ಹನ್ನೆರಡನೇ ಶತಮಾನ ಕಂಡ ಸಾವಿರಾರು ಶಿವಶರಣರಲ್ಲಿ ಅಂಬಿಗರ ಚೌಡಯ್ಯನೂ ಒಬ್ಬ. ತನ್ನ ವಿಶಿಷ್ಟ ನಿಲುವಿನಿಂದಾಗಿ ಭಿನ್ನವಾಗಿ ಕಂಗೊಳಿಸುತ್ತಾನೆ. ಈಗಿನ ಹಾವೇರಿ ಜಿಲ್ಲೆಯ ಚೌಡಯ್ಯದಾನಪುರ (ಆಗಿನ ಶಿವಪುರ)ದಲ್ಲಿ ಜನಿಸಿ ತುಂಗಭದ್ರಾ ನದಿಯಲ್ಲಿ ಅಂಬಿಗ ವೃತ್ತಿ ಹೊಂದಿದವನು ಚೌಡಯ್ಯ. ಬಸವಣ್ಣ-ಅಲ್ಲಮರ ಸಮಸಮಾಜದ ಅಲೆಗಳ ಸೆಳೆತಕ್ಕೆ ಒಳಗಾಗಿ ಅನೇಕ ಕಾಯಕಜೀವಿಗಳಂತೆ ಕಲ್ಯಾಣದ ಅನುಭವ ಮಂಟಪದಲ್ಲಿ ತಾನೂ ಭಾಗವಹಿಸಿ ಕೃತಾರ್ಥನಾದವ.

ವಚನಕಾರರಲ್ಲಿಯೇ ಅಂಬಿಗರ ಚೌಡಯ್ಯ ಬಲು ಬಂಡಾಯಗಾರ. ಆತನ ಬಂಡಾಯದ ಹಿಂದೆ ಸಮಾಜವನ್ನು ಸಮಗ್ರವಾಗಿ ಬದಲಾವಣೆ ಮಾಡುವ ಆಶಯವಿದೆ, ಸವೋದಯದ ತುಡಿತವಿದೆ, ಶೋಷಣಾಮುಕ್ತ ಸಮಸಮಾಜ ಕಟ್ಟುವ ತವಕವಿದೆ. ಆತ ಯಾವುದನ್ನೂ ಕುರುಡಾಗಿ ನಂಬುವಂಥವನಲ್ಲ, ಸ್ವ-ವಿಮರ್ಶೆ ಅವನ ಚಿಂತನೆಯ ಮೂಲ ಝುರಿ. ಅದಕ್ಕಾಗಿಯೇ ಉಳಿದ ವಚನಕಾರರು ಸ್ಥಾವರಲಿಂಗ ಬಹಿಷ್ಕರಿಸಿಯೂ ತಮ್ಮ ವಚನಗಳಿಗೆ ಸ್ಥಾವರ ದೇವರುಗಳ ಅಂಕಿತ ಇಟ್ಟುಕೊಂಡಿದ್ದನ್ನು ಪ್ರಶ್ನಿಸಿ ತನ್ನ ವಚನಾಂಕಿತವನ್ನು ಅಂಬಿಗರ ಚೌಡಯ್ಯ ಎಂದೇ ಇಟ್ಟುಕೊಂಡ.

ಅದಕ್ಕಾಗಿಯೇ ‘ಅಂಬಿಗ ಅಂಬಿಗ ಎಂದು ಕುಂದು ನುಡಿಯದಿರು’ ಎಂದು ಗುಡುಗುತ್ತಾನೆ ಮತ್ತು ‘ನಂಬಿದರೆ ಒಂದೇ ಹುಟ್ಟಲಿ ಕಡೆಯ ಹಾಯಿಸುವೆ’ ಎಂದು ಅಭಯಕೊಟ್ಟು ಯಾವ ಕಾಯಕವೂ ಮೇಲಲ್ಲ ಕೀಳಲ್ಲ ಸರ್ವಸಮಾನಾರ್ಹವಾದವುಗಳೆಂದು ವೃತ್ತಿ ಗೌರವವನ್ನು ಎತ್ತಿ ಹಿಡಿಯುತ್ತಾನೆ. ಜಾತಿವಾದವನ್ನೇ ಮೂಲೋತ್ಪಾಟನೆ ಮಾಡುವ ಬಂಡಾಯಗಾರನಾಗಿ ನಿಲ್ಲುವ ಚೌಡಯ್ಯ ಜಾತಿವಾದಿಗಳಿಗೆ ಮೂಲಭೂತ ಪ್ರಶ್ನೆಗಳನ್ನು ಕೇಳಿದ್ದಾನೆ.

ಎಲ್ಲರೂ ಹುಟ್ಟಿ ಬಂದದ್ದು ಉಚ್ಚಿ ಬಚ್ಚಲದಲ್ಲಲ್ಲವೇ?

ಹಾಗಾದರೆ ನಾ ಹೆಚ್ಚು ನೀ ಹೆಚ್ಚು ಎನ್ನುವುದು ಹುಚ್ಚುತನವಲ್ಲವೇ?

ಎಲುವು ತೊಗಲು ನರಮಾಂಸ ಮೇಲೆ ಚರ್ಮದ್ಹೊದಿಕೆ

ಹೊಲೆ ಶುಕ್ಲದಿಂದಾದ ದೇಹಕ್ಕೆ ಕುಲವಾವುದು?

ಯೋನಿಯಲ್ಲಿ ಬಿದ್ದವರಿಗೆ ಎಲ್ಲಿಯ ಕುಲವಯ್ಯಾ?

ಚೌಡಯ್ಯ ಬರೀ ಪ್ರಶ್ನಿಸುವ ನೇತ್ಯಾತ್ಮಕ ಬಂಡಾಯಗಾರ ನಲ್ಲ, ಇತ್ಯಾತ್ಮಕವಾದ ಸಮಾಜಮುಖಿಯಾದ ಅನುಪಮ ದಾರ್ಶನಿಕ ಬಂಡಾಯಗಾರ.

ಅಂಬಿಗರ ಚೌಡಯ್ಯನ ದೂರದೃಷ್ಟಿ, ವಿಶ್ವಮಾನವ ಪ್ರಜ್ಞೆ ಅಭೂತಪೂರ್ವ ವಾದುದು. ಯಾವುದೇ ತತ್ತ್ವ-ನೀತಿ, ದರ್ಶನ, ಭಗವತ್ ಸಾಕ್ಷಾತ್ಕಾರ ಮಾರ್ಗವು ವಿಶ್ವದ ಸಕಲ ಮಾನವರಿಗೂ ಅನ್ವಯಿಸುವಂತಾಗಬೇಕೆಂಬುದೇ ಅವನೆಲ್ಲ ಚಿಂತನೆಗೆ ಮೂಲ. ಆ ಮಾರ್ಗ ಒಂದು ವರ್ಗ ಅಥವಾ ಧರ್ಮ ಅಥವಾ ಜಾತಿ ಸೃಷ್ಟಿಗೆ ಕಾರಣವಾಗಬಾರದೆಂದು ಅವನು ಸಾಕಷ್ಟು ಕಾಳಜಿ ವಹಿಸಿದ್ದಾನೆ. ಜ್ಞಾನಪೂರ್ವದಲ್ಲಿ ಅವನು ಒಂದು ವ್ಯವಸ್ಥೆಗೆ ಒಳಪಟ್ಟಿದ್ದರೂ ಜ್ಞಾನೋತ್ತರದಲ್ಲಿ ಅವನು ಎಲ್ಲ ಶೃಂಖಲೆಗಳನ್ನು ತ್ಯಜಿಸಿದ. ಚೌಡಯ್ಯ ಸಾಮಾಜಿಕ ಕಾಳಜಿ ಹೊಂದಿದ ವಚನಕಾರ. ತನ್ನಂತೆ ಎಲ್ಲರಲ್ಲಿಯೂ ಸತ್ಯಸದಾಚಾರಗಳಿಂದ ಒಡಗೂಡಿದ ನಡೆ, ಸಟೆಯನು ಬಿಟ್ಟು ದಿಟವನು ಹಿಡಿವ ಛಲವನ್ನು ನಿರೀಕ್ಷಿಸುತ್ತಾನೆ. ಅದು ಕಾಣದಿದ್ದಾಗ ಬಂಡಾಯವೇಳುತ್ತಾನೆ; ಬೈದು, ತಿಳಿಹೇಳಿ ತಿದ್ದಲನುವಾಗುತ್ತಾನೆ; ಆಧ್ಯಾತ್ಮಿಕ ಮಾನವತಾವಾದವನ್ನು ಬಿತ್ತರಿಸುತ್ತಾನೆ. ಅದಕ್ಕಾಗಿ ಗಟ್ಟಿಯಾದ ಬಂಡಾಯದ ಧ್ವನಿಯಲ್ಲಿ ತನ್ನ ತತ್ತ್ವ ಪ್ರತಿಪಾದಿಸುತ್ತಾನೆ. ಚೌಡಯ್ಯನ ತತ್ತ್ವ-ನೀತಿ-ಬೋಧನೆಗಳು ಆತನ ಜೀವನದಂತೆ ಸರಳವಾಗಿವೆ. ಜಾತ್ಯತೀತ-ಮತಾತೀತ-ಸವೋದಯ ಯುಕ್ತವಾದ ಆತನ ತತ್ತ್ವಗಳನ್ನು ಪಾಲಿಸಿದರೆ ನಮ್ಮಲ್ಲಿ ಅಂತಃಶ್ಯಾಂತಿ ಏರ್ಪಟ್ಟು ವಿಶ್ವಶಾಂತಿ ವಾತಾವರಣ ನಿರ್ವಣವಾಗುವುದರಲ್ಲಿ ಸಂದೇಹವೇ ಇಲ್ಲ.

| ಡಾ.ಬಸವರಾಜ ಸಿದ್ಧಾಶ್ರಮ


ನಿಮ್ಮ ಆರ್ಥಿಕ ಸಹಾಯ ದಿಂದ ಮಾತ್ರ ಮಾಧ್ಯಮವನ್ನು ಪಾರದರ್ಶಕವಾಗಿ  ಮುನ್ನಡೆಸಲು ಸಾಧ್ಯ

ಮಾಧ್ಯಮ ಮುನ್ನೆಡೆಯಲ್ಲು ನಿವು 100,500,1000,2500,5000,10000,50000,1 ಲಕ್ಷ.  ದೇಣಿಗೆ ಸಹಾಯ ನೀಡಬಹುದು
ಗೂಗಲ್ ಪೇ ಪೋನ ಪೇ ಮೂಲಕ ಕೂಡ ನೀಡಬಹುದು 9008329745
ಅಂಬಿಗ ನ್ಯೂಸ್ ಟಿವಿ ಗೆ ಸಹಾಯ ನೀಡಲು ಈ ಕೇಳಗಿನ ಕೋಡ ಬಳಸಿ ಆನ್ ಲೈನ್ ದೇಣಿಗೆ ನೀಡಬಹುದು

Amaresh kamanakeri
A/c 62053220183 IFC-SBIN0020354 ಪೋನ ನಂ 9008329745

Be the first to comment

Leave a Reply

Your email address will not be published.


*