ಇತರೆ ಸಮಸ್ಯೆಯಿಂದ ನಿಟ್ಟುಸಿರು ಬಿಟ್ಟ ರೈತರು:3406 ರೈತರ ಪಹಣಿಗೆ ತಿದ್ದುಪಡಿ : ಶಾಸಕ ಚರಂತಿಮಠ

ವರದಿ: ಶರಣಪ್ಪ ಹೆಳವರ ಬಾಗಲಕೋಟೆ

ಜಿಲ್ಲಾ ಸುದ್ದಿಗಳು

ಬಾಗಲಕೋಟೆ: ಕಳೆದ 20 ವರ್ಷಗಳಿಂದ ರೈತರ ಪಹಣಿಯ ಪಟ್ಟಾ ಕಾಲಂ 6 ರಲ್ಲಿ ಇತರೆ ನಮೂದಾಗಿರುವದನ್ನು 3406 ಪಹಣಿಗಳಲ್ಲಿ ತಿದ್ದುಪಡಿ ಮಾಡಿದ್ದರಿಂದ ರೈತರು ನಿಟ್ಟುಸಿರು ಬಿಡುವಂತಾಗಿದೆ ಎಂದು ಶಾಸಕ ವೀರಣ್ಣ ಚರಂತಿಮಠ ಹೇಳಿದರು.

ತಾಲೂಕಿನ ಬೇವೂರ, ಹಳ್ಳೂರ, ಭೈರಮಟ್ಟಿ, ಬೆನಕಟ್ಟಿ ಹಾಗೂ ಮನ್ನಿಕಟ್ಟಿ ಗ್ರಾಮಗಳಿಗೆ ಬುಧವಾರ ಭೇಟಿ ನೀಡಿ ಕಂದಾಯ ಇಲಾಖೆ ಹಮ್ಮಿಕೊಂಡ ಕಂದಾಯ ಅದಾಲತ್ ಕಾರ್ಯಕ್ರಮದಲ್ಲಿ ಸರಿಪಡಿಸಲಾದ ಒಟ್ಟು 3406 ರೈತರಿಗೆ ಪಹಣಿಗಳನ್ನು ವಿತರಿಸಿದ ಮಾತನಾಡಿದ ಅವರು ರೈತರ ಪಹಣಿಯ ಕಾಲಂ 6ರಲ್ಲಿ ಇತರೆ ಎಂದು ನಮೂದಾಗಿದ್ದರಿಂದ ಬೆಳೆಸಾಲ, ಖರೀದಿ, ವಾಟನಿ ಹಾಗೂ ಬೇರೆಯವರಿಗೆ ಮಾರಾಟ ಮಾಡಲು ಅನಾನುಕೂಲವಾಗಿತ್ತು. ಇತರೆ ಕಾಲಂ ತೆಗೆದು ಹಾಕಿ ಸರ್ಕಾರಿ ಅಥವಾ ಹಳೆ ಶರ್ತು ಅಂತಾ ದಾಖಲಿಸಿ ನೀಡಿದ್ದರಿಂದ ರೈತರು ನಿಟ್ಟುಸಿರು ಬಿಡುವಂತೆ ಮಾಡಲಾಗಿದೆ ಎಂದರು.

ತಾಲೂಕಿನ 5 ಗ್ರಾಮಗಳಲ್ಲಿನ ಪಹಣಿಯಲ್ಲಿ 5 ಸಾವಿರಕ್ಕೂ ಹೆಚ್ಚು ಇತರೆ ನಮೂದಾಗಿದ್ದು, ಈ ಪೈಕಿ ಸದ್ಯ 3406 ಪಹಣಿಗಳನ್ನು ತಿದ್ದುಪಡಿ ಮಾಡಿ ರೈತರಿಗೆ ನೀಡಲಾಗುತ್ತಿದೆ. ಸಾಂಕೇತಿಕವಾಗಿ ಕೆಲವೊಂದು ರೈತರಿಗೆ ಪಹಣಿಗಳನ್ನು ವಿತರಿಸಲಾಗಿದ್ದು, ಬರುವ ಮಾರ್ಚ 12 ರಂದು ಸರಕಾರದ ಮಹತ್ವದ ಯೋಜನೆಯಾದ ಕಂದಾಯ ಇಲಾಖೆಯ ದಾಖಲೆಗಳು ಮನೆ ಬಾಗಿಲಿಗೆ ತಲುಪಿಸುವ ಕಾರ್ಯ ನಡೆಯಲಿದೆ ಎಂದರು.

ಕೆಲವೊಂದು ಪಹಣಿಯಲ್ಲಿ ತಿಮ್ಮಾಪೂರ ಏತ ನೀರಾವರಿ ಎಂದು ನಮೂದಾಗಿರುವ ಬಗ್ಗೆ ತಿಳಿದು ಬಂದಿದ್ದು, ಅವುಗಳನ್ನು ಸಹ ಗ್ರಾಮವಾರು ಪಟ್ಟಿ ಮಾಡಿ ಒಂದೇ ಅರ್ಜಿಯಲ್ಲಿ ಗ್ರಾಮ ಲೆಕ್ಕಾಧಿಕಾರಿಗಳ ಮೂಲಕ ಕಳುಹಿಸಿಕೊಟ್ಟಲ್ಲಿ ಜಿಲ್ಲಾಧಿಕಾರಿಗಳೇ ಕೆಬಿಜಿಎನ್‍ಎಲ್ ವ್ಯವಸ್ಥಾಪಕ ನಿರ್ದೇಶಕರ ಹುದ್ದೆಯ ಪ್ರಭಾರಿ ಇರುವದರಿಂದ ಈ ಬಗ್ಗೆ ಪರಿಶೀಲಿಸಿ ಅವುಗಳನ್ನು ಸಹ ತಿದ್ದುಪಡಿ ಮಾಡಿ ಸರಿಪಡಿಸಿ ಕೊಡಲಾಗುವುತ್ತದೆ. ಗ್ರಾಮಗಳಲ್ಲಿ ಮುಖ್ಯವಾಗಿ ವಾರಸಾ, ಪೋಡಿ, ಸರ್ವೆ ಕಾರ್ಯ ಮುಖ್ಯವಾಗಿದ್ದು, ಗ್ರಾಮ ಲೆಕ್ಕಾಧಿಕಾರಿ ಮುತುವರ್ಜಿ ಕೆಲಸ ಮಾಡಲು ತಿಳಿಸಿದರು.

ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ಮಾತನಾಡಿ ರೈತರ ಪಹಣಿಯಲ್ಲಿ ಕಾಲಂ ನಂ.6ರಲ್ಲಿ ಇತರೆ ಇರುವ ಬಗ್ಗೆ ಇಲಾಖೆಯ ತಹಶೀಲ್ದಾರ ನಾಯ್ಕಲಮಠ ಹಾಗೂ ತಹಶೀಲ್ದಾರ ಗುರುಸಿದ್ದಯ್ಯ ಹಿರೇಮಠ ಅವರ ಶ್ರಮದಿಂದ 15 ದಿನಗಳ ಕಾಲ ಪ್ರತಿಯೊಂದು ದಾಖಲೆಗಳನ್ನು ಪರಿಶೀಲಿಸಿ ತಿದ್ದುಪಡಿ ಮಾಡಲಾಗಿದೆ. ಇದರಿಂದ ತಮ್ಮ ಜಮೀನಿನ ಮೇಲೆ ಎಲ್ಲ ರೀತಿಯ ವಹಿವಾಟು ಮಾಡಬಹುದಾಗಿದೆ. ಇಂತಹ ಸಮಸ್ಯೆ 5 ಸಾವಿರಕ್ಕೂ ಹೆಚ್ಚು ಇದ್ದು, ಈ ಪೈಕಿ 3406 ಪಹಣಿಗಳನ್ನು ತಿದ್ದುಪಡಿ ಮಾಡಲಾಗಿ ಉಳಿದವುಗಳ ತಿದ್ದುಪಡಿಗಳ ಕಾರ್ಯ ನಡೆದಿದೆ ಎಂದರು.

ತಹಶೀಲ್ದಾರ ಗುರುಸಿದ್ದಯ್ಯ ಹಿರೇಮಠ ಮಾತನಾಡಿ ಬೇವೂರ, ಹಳ್ಳೂರ, ಭೈರಮಟ್ಟಿ, ಬೆನಕಟ್ಟಿ ಹಾಗೂ ಮನ್ನಿಕಟ್ಟಿ ಗ್ರಾಮಗಳಲ್ಲಿ ಒಟ್ಟು 5 ಸಾವಿರಕ್ಕೂ ಹೆಚ್ಚು ಕಾಲಂ ನಂ.6ರಲ್ಲಿ ಇತರೆ ನಮೂದಾಗಿರುವ ಸಮಸ್ಯೆಗಳಿದ್ದು, ಈ ಪೈಕಿ ಬೇವೂರ ಗ್ರಾಮದ 2094, ಹಳ್ಳೂರ ಗ್ರಾಮದ 569, ಬೈರಮಟ್ಟಿ ಗ್ರಾಮದ 503, ಬೆನಕಟ್ಟಿ ಗ್ರಾಮದ 235 ಹಾಗೂ ಮನ್ನಿಕಟ್ಟಿ ಗ್ರಾಮದ 5 ಸೇರಿ ಒಟ್ಟು 3406 ಪಹಣಿಗಳನ್ನು ತಿದ್ದುಪಡಿ ಮಾಡಲಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಉಪವಿಭಾಗಾಧಿಕಾರಿ ಎಂ.ಗಂಗಪ್ಪ, ತಾಲೂಕಾ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಶಿವಾನಂದ ಕಲ್ಲಾಪೂರ, ಬೇವೂರ ಗ್ರಾಮ ಪಂಚಾಯತಿ ಅಧ್ಯಕ್ಷ ತುಕಾರಾಮ ಮಾಗಿ, ಗ್ರಾಮ ಲೆಕಾಧಿಕಾರಿ ಶೇಖರ ಮೋಳಿ, ಶಿರಸ್ತೆದಾರ ಎಸ್.ಎಸ್.ಲಾಯದಗುಂದಿ, ಗ್ರಾಮದ ಪ್ರಮುಖರಾದ ಜಿ.ವಾಯ್.ಹೆರಕಲ್, ಸಂಗಣ್ಣ ಕಲಾದಗಿ, ಸುರೇಶ ಕೊನ್ನೂರ, ಗ್ಯಾನಪ್ಪ ಹೆರಕಲ್, ಈರಪ್ಪ ಅಕ್ಕಿ, ಶೇಖಣ್ಣ ಹೆರಕಲ್ಲ ಸೇರಿದಂತೆ ಇತರರು ಉಪಸ್ಥಿತರಿದ್ದರು.

Be the first to comment

Leave a Reply

Your email address will not be published.


*