ರಾಜ್ಯ ಸುದ್ದಿಗಳು
ದೇವನಹಳ್ಳಿ
ದೇವನಹಳ್ಳಿ ತಾಲೂಕಿನ ಚನ್ನರಾಯಪಟ್ಟಣ ಹೋಬಳಿ ಚನ್ನಹಳ್ಳಿ ಗ್ರಾಮ ಪಂಚಾಯಿತಿಯ ಸಭಾಂಗಣದಲ್ಲಿ ಗ್ರಾಪಂ ವತಿಯಿಂದ ಹಮ್ಮಿಕೊಂಡಿದ್ದ ೨೦೨೦-೨೧ನೇ ಸಾಲಿನ ಎಸ್‌ಸಿ/ಎಸ್‌ಟಿ ಮತ್ತು ವಿಕಲಚೇತನ ಫಲಾನುಭವಿಗಳಿಗೆ ಸೌಲಭ್ಯ ವಿತರಣಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಮಾಜಿ ಸಂಸದ ಸಿ.ನಾರಾಯಣಸ್ವಾಮಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ,ಪಂಚಾಯಿತಿ ವ್ಯಾಪ್ತಿಯಲ್ಲಿ ಮುಖ್ಯವಾಗಿ ಎಸ್‌ಸಿ/ಎಸ್‌ಟಿ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ಮತ್ತು ಅರ್ಹ ಫಲಾನುಭವಿಗಳಿಗೆ ಪ್ರಮಾಣ ಪತ್ರ ವಿತರಿಸುತ್ತಿರುವುದು ಶ್ಲಾಘನೀಯ. ಪಂಚಾಯಿತಿ ವ್ಯವಸ್ಥೆಯಲ್ಲಿ ಗ್ರಾಮ ಪಂಚಾಯಿತಿ, ತಾಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿ ಎಂದು ಮೂರು ಅಂಗಗಳು ಪಂಚಾಯತ್ ರಾಜ್ ವ್ಯವಸ್ಥೆಯು ಸಂವಿಧಾನದಲ್ಲಿ ಆದಂತಹ ತಿದ್ದುಪಡಿಯ ಅನುಗುಣವಾಗಿ ಇಡೀ ರಾಷ್ಟ್ರದಲ್ಲಿಯೇ ಕಾರ್ಯಕ್ರಮಗಳನ್ನು ಮಾಡುತ್ತಾರೆ. ಕರ್ನಾಟಕ ರಾಜ್ಯದಲ್ಲಿಯೂ ಸಹ ಅದೇ ರೀತಿ ಜಾರಿಗೆ ಬಂದಿರುತ್ತದೆ ಎಂದು ಪಂಚಾಯತ್ ರಾಜ್ಯ ವ್ಯವಸ್ಥೆಯ ಮತ್ತು ಸೌಲಭ್ಯಗಳ ಬಗ್ಗೆ ತಿಳಿಸಿಕೊಟ್ಟರು.
ಹಿರಿಯ ಮುಖಂಡ ಚನ್ನಹಳ್ಳಿ ಬಿ.ರಾಜಣ್ಣ ಮಾತನಾಡಿ,ಇಂತಹ ಕಾರ್ಯಕ್ರಮಗಳು ಹೆಚ್ಚಾಗಿ ಆಗಬೇಕು. ಕೋವಿಡ್ ಸಂದರ್ಭದಲ್ಲಿ ಶಾಲಾ ಮಕ್ಕಳಿಗೆ ಸಾಕಷ್ಟು ತೊಂದರೆಯಾಗುತ್ತಿತ್ತು. ಜತೆಗೆ ಜೀವನ ನಡೆಸಲು ಸಹ ಕಷ್ಟಕರವಾಗಿತ್ತು. ಇಂತಹ ಸಂದರ್ಭದಲ್ಲಿ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗಲೆಂದು ಗ್ರಾಪಂನಿಂದ ಆರ್ಥಿಕ ನೆರವು ನೀಡುತ್ತಿರುವುದು ಶ್ಲಾಘನೀಯವಾದ್ದು ಎಂದು ಹೇಳಿದರು.
ಮಾಜಿ ಶಾಸಕ ಕೆ.ವೆಂಕಟಸ್ವಾಮಿ ಮಾತನಾಡಿ, ಪಂಚಾಯಿತಿಯಿಂದ ನೀಡುತ್ತಿರುವ ಸೌಲಭ್ಯಗಳನ್ನು ಮಕ್ಕಳು ಸರಿಯಾದ ರೀತಿಯಲ್ಲಿ ಸದ್ಭಳಕೆ ಮಾಡಿಕೊಳ್ಳಬೇಕು. ಸಮಾಜದಲ್ಲಿ ಉತ್ತಮ ರೀತಿಯಲ್ಲಿ ಬದುಕು ನಡೆಸುವಂತಾಗಬೇಕು. ಈ ಭಾಗದಲ್ಲಿ ಕೆಐಎಡಿಬಿ ಅಕ್ವಿಸಿಷನ್ ಪ್ರಕ್ರಿಯೆ ನಡೆಯುತ್ತಿರುವುದರಿಂದ ರೈತ ಮಿತ್ರರು ತಮ್ಮ ಜಮೀನುಗಳನ್ನು ಮಾರಿಕೊಳ್ಳದೆ ಉಳಿಸಿಕೊಳ್ಳುವಂತೆ ಆಗಬೇಕು. ಅಲ್ಪಸ್ವಲ್ಪ ಹಣದಾಸೆಗೆ ಕೋಟ್ಯಾಂತರ ರೂಪಾಯಿ ಬೆಲೆ ಬಾಳುವ ಜಮೀನುಗಳನ್ನು ಕಳೆದುಕೊಳ್ಳುವ ಬದಲಿಗೆ ಜಮೀನುಗಳನ್ನು ಉಳಿಸಿಕೊಂಡು ನಿಮ್ಮ ಪಿಳಿಗೆಗೆ ಅನುಕೂಲವಾಗುಂತೆ ನೋಡಿಕೊಳ್ಳಬೇಕು ಎಂದು ಸಲಹೆ ಮಾಡಿದರು.
ಚನ್ನಹಳ್ಳಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮೆಹಬೂಬ್‌ಪಾಷ ಮಾತನಾಡಿ, ಸರಕಾರಿ ಅಧಿಕಾರಿಗಳು ಯಾವುದೇ ಅಭಿವೃದ್ಧಿ ಕೆಲಸಗಳನ್ನು ಮಾಡಲು ಮುಂದಾಗಬೇಕಾದರೆ ಅದಕ್ಕೆ ಪೂರಕವಾಗಿ ಜನಪ್ರತಿನಿಧಿಗಳು ಸಹಕಾರ ನೀಡುವಂತಾದ ಮಾತ್ರ ಸರ್ವಾಂಗೀಣ ಅಭಿವೃದ್ಧಿ ಕಾಣಲು ಸಾಧ್ಯ. ಮ್ಮ ಪಂಚಾಯಿತಿ ವತಿಯಿಂದ ಶೇ.೨೫ರ ಅನುದಾನದಲ್ಲಿ ಗ್ರಾಪಂ ವ್ಯಾಪ್ತಿಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ವಿದ್ಯಾರ್ಥಿಗಳಿಗೆ ಆರ್ಥಿಕ ಧನ ಸಹಾಯ ಮತ್ತು ಕಂದಾಯ ಇಲಾಖೆಯಿಂದ ಅರ್ಹ ಫಲಾನುಭವಿಗಳಿಗೆ ಪಿಂಚಣಿ ಪ್ರಮಾಣ ಪತ್ರಗಳನ್ನು ವಿತರಿಸುವ ಕಾರ್ಯ ಮಾಡಲಾಗುತ್ತಿದೆ. ಗ್ರಾಪಂಗೆ ಅರ್ಜಿ ಸಲ್ಲಿಸಿರುವ ಎಲ್ಲಾ ಪರಿಶಿಷ್ಟ ವರ್ಗದ ೧೦೦ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ೨೦೨೨ನೇ ಸಾಲಿನಲ್ಲಿ ಹಿಂದಿನ ತಿಂಗಳವರೆಗೆ ೩೫ಸಾವಿರ ರೂ. ಈ ತಿಂಗಳ ಖರ್ಚು ೧ಲಕ್ಷ ೭೮ಸಾವಿರ ರೂ. ಒಟ್ಟು ೨ಲಕ್ಷ ೧೩ಸಾವಿರ ರೂ.ಗಳ ಅನುದಾನದಡಿ ಸಹಾಯಧನ ವಿತರಣಾ ಮಾಡಲಾಗುತ್ತಿದೆ. ಬಾದಶಃ ಇಡೀ ಜಿಲ್ಲೆಯಲ್ಲಿ ಇಷ್ಟೋಂದು ಸಂಖ್ಯೆಯಲ್ಲಿ ವಿದ್ಯಾರ್ಥಿಗಳಿಗೆ ಸಹಾಯಧನ ನೀಡುತ್ತಿರುವ ಗ್ರಾಪಂ ಅದು ಚನ್ನಹಳ್ಳಿ ಗ್ರಾಪಂ ಆಗಿದೆ. ಮುಂದಿನ ದಿನಗಳಲ್ಲಿ ಗ್ರಾಪಂ ವ್ಯಾಪ್ತಿಯಲ್ಲಿ ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಸರಕಾರಿ ಸೌಲಭ್ಯ ಸಿಗುವಂತೆ ಮಾಡಲಾಗುತ್ತದೆ ಎಂದು ಪ್ರಾಸ್ತಾವಿಕ ನುಡಿ ನುಡಿದರು.
ಈ ವೇಳೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮುನಿರತ್ನಮ್ಮ, ಉಪಾಧ್ಯಕ್ಷ ರಾಧಾಕೃಷ್ಣ, ಸದಸ್ಯರಾದ ನರಸಿಂಹಯ್ಯ, ಗೋಪಿನಾಥ್, ದೇವರಾಜ್, ಶಶಿಕಲಾ ಮುನಿರಾಜು, ಶೋಭಶಿವಣ್ಣ, ಮುನೇಗೌಡ, ಭೈರೇಗೌಡ, ಮುಖಂಡರಾದ ರಮೇಶ್, ಚಂದ್ರು, ಮುನಿರಾಜು, ಶಿವಣ್ಣ, ಪಿಡಿಒ ಮೆಹಬೂಬ್ ಬಾಷ, ಕಾರ್ಯದರ್ಶಿ ಸುಜಾತ, ಬಿಲ್ ಕಲೆಕ್ಟರ್ ಸುರೇಶ್, ಸಿಬ್ಬಂದಿ, ವಿದ್ಯಾರ್ಥಿಗಳು, ಗ್ರಾಮಸ್ಥರು ಇದ್ದರು.
Be the first to comment