ರಾಜ್ಯ ಸುದ್ದಿಗಳು
ದೇವನಹಳ್ಳಿ
ಸಂಘದ ನೂತನ ಕಟ್ಟಡ ನಿರ್ಮಾಣಕ್ಕೆ ಸರ್ವ ಸದಸ್ಯರು, ಗ್ರಾಮಸ್ಥರ ಸಹಕಾರ ಹೆಚ್ಚು ಬೇಕಾಗುತ್ತದೆ. ಸಂಘವು ಅಭಿವೃದ್ಧಿಗೊಳ್ಳಲು ಎಲ್ಲಾ ರೀತಿಯಲ್ಲಿ ಶ್ರಮವಹಿಸಲಾಗುತ್ತಿದೆ ಎಂದು ಕುಂದಾಣ ವಿಎಸ್‌ಎಸ್‌ಎನ್ ಅಧ್ಯಕ್ಷ ರಾಮಣ್ಣ ತಿಳಿಸಿದರು.ದೇವನಹಳ್ಳಿ ತಾಲೂಕಿನ ಕುಂದಾಣ ಗ್ರಾಮದ ವ್ಯವಸಾಯ ಸೇವಾ ಸಹಕಾರ ಸಂಘದ ಆವರಣದಲ್ಲಿ ೨೦೨೦-೨೧ನೇ ಸಾಲಿನ ವಾರ್ಷಿಕ ಮಹಾಸಭೆಯಲ್ಲಿ ಅವರು ಮಾತನಾಡಿದರು. ರೈತರು ಆರ್ಥಿಕವಾಗಿ ಸದೃಢಗೊಳ್ಳಲು ಸಹಕಾರ ಸಂಘಗಳು ಸಾಕಷ್ಟು ಸಹಕಾರಿಯಾಗಿದೆ. ಪ್ರತಿ ಸದಸ್ಯರು ಹೆಚ್ಚಿನ ಸಾಲವನ್ನು ಪಡೆದುಕೊಂಡ ನಂತರ ಸಾಲವನ್ನು ಸಕಾಲದಲ್ಲಿ ಪಾವತಿ ಮಾಡಬೇಕು. ಸಂಘದಲ್ಲಿ ನಮಗೆ ಬಿಡಿಗಾಸು ಬೀಕಿಲ್ಲ. ತಾವು ಸಂಘವನ್ನು ಅಭಿವೃದ್ಧಿಪಡಿಸಲು ಅಧ್ಯಕ್ಷರಾಗಿದ್ದೇವೆ. ಯಾರಿಗೂ ಅಧಿಕಾರ ಶಾಶ್ವತವಲ್ಲ. ಮಾಡಿರುವ ಕೆಲಸಗಳೇ ಶಾಶ್ವತವಾಗಿರುತ್ತದೆ. ಸರ್ವ ಸದಸ್ಯರು ಸಹಕಾರ ನೀಡಿದರೆ ಸಂಘವನ್ನು ಮೇಲ್ದರ್ಜೆಗೆ ಏರಿಸಲು ಎಲ್ಲಾ ರೀತಿಯ ಪ್ರಯತ್ನ ಮಾಡಲಾಗುತ್ತದೆ. ಸಂಘವು ಪ್ರಸ್ತುತ ಲಾಭದಲ್ಲಿದೆ. ಮತ್ತಷ್ಟು ಲಾಭವನ್ನು ಸಂಘಕ್ಕೆ ತಂದುಕೊಡುವ ನಿಟ್ಟಿನಲ್ಲಿ ಪ್ರತಿಯೊಬ್ಬರು ಬ್ಯಾಂಕಿಂಗ್ ವ್ಯವಹಾರವನ್ನು ಸಂಘದಲ್ಲಿಯೇ ನಡೆಸುವಂತಾಗಬೇಕು ಎಂದು ಸಲಹೆ ಮಾಡಿದರು.
ಬೆಂಗಳೂರು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ವೃತ್ತಿಪರ ನಿರ್ದೇಶಕ ಕೆ.ರಮೇಶ್ ಮಾತನಾಡಿ, ಸಂಘದಲ್ಲಿ ಹೆಚ್ಚು ಹೆಚ್ಚು ಫಿಕ್ಸ್‌ಡ್ ಡೆಪಾಸಿಟ್ ಆಗಬೇಕಿದೆ. ಕುಂದಾಣವು ಜಿಲ್ಲಾ ಕೇಂದ್ರವಿರುವ ಕೇಂದ್ರಸ್ಥಾನವಾಗಿದೆ. ಈಗಾಗಲೇ ಹಲವಾರು ಕಡೆಗಳಲ್ಲಿ ಸಂಘಗಳು ಸಾಕಷ್ಟು ಅಭಿವೃದ್ಧಿಗೊಳ್ಳುತ್ತಿವೆ. ಅಲ್ಲಿನ ರೈತರೂ ಸಹ ಅಭಿವೃದ್ಧಿಯ ದಾಪುಗಾಲು ಹಾಕುತ್ತಿದ್ದಾರೆ. ಕುಂದಾಣ ವಿಎಸ್‌ಎಸ್‌ಎನ್‌ನಲ್ಲಿ ೩ಕೋಟಿ ಸಾಲ ವಿತರಣೆ ಮಾಡಿದೆ ಎಂದರೆ ಅದು ಕಡಿಮೆಯೇನಲ್ಲ. ೧ ಕೋಟಿ ರೂ.ಗಳಷ್ಟು ಗೋಲ್ಡ್ ಲೋನ್ ಸಹ ನೀಡಿದೆ. ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು. ಸಹಕಾರ ಸಂಘಗಳಿಗೆ ಹೋಲಿಸಿಕೊಂಡರೆ ಯಾವ ಬ್ಯಾಂಕಿನಲ್ಲಿಯೂ ಸಹ ಕಡಿಮೆ ಬಡ್ಡಿ ನೀಡುತ್ತಿಲ್ಲ. ಸಂಸ್ಥೆಗಳು ಬೆಳೆಸುವುದೆಂದರೆ ಅಷ್ಟೇನು ಸುಲಭದ ಕೆಲಸವಲ್ಲ. ನಿಮ್ಮ ಸಂಘವನ್ನು ಅಭಿವೃದ್ಧಿಗೊಳಿಸಿದರೆ ಮುಂದಿನ ದಿನಗಳಲ್ಲಿ ನೀವು ಸಹ ಹಂತ ಹಂತವಾಗಿ ಅಭಿವೃದ್ಧಿಗೊಳ್ಳುತ್ತೀರಿ. ಮುಂದಿನ ದಿನಗಳಲ್ಲಿ ಸಂಘದ ರೈತರಿಗೆ ಸಾಲ ಸೌಲಭ್ಯದ ಜೊತೆಗೆ ಕುರಿ, ಮೇಕೆ, ಹಂದಿ, ಕೋಳಿ, ಅಂಗಡಿ ಇತರೆ ವ್ಯಾಪಾರ ಸಾಲವನ್ನು ಸಹ ನೀಡಲಾಗುತ್ತಿದೆ. ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದು ಎಂದು ಮಾಹಿತಿ ನೀಡಿದರು.
ಈ ವೇಳೆಯಲ್ಲಿ ಸಂಘದ ಆಡಳಿತ ಮಂಡಳಿ ನಿರ್ದೇಶಕರಾದ ಚನ್ನಕೃಷ್ಣಪ್ಪ, ಮಂಜುನಾಥ್, ಬಸವರಾಜ್, ಮಧು, ಪ್ರಭಾಕರ್, ಮಲ್ಲಪ್ಪ, ವಿಜಯ್, ಸುಶೀಲಮ್ಮ, ಚಿಕ್ಕಮುನಿಶಾಮಪ್ಪ, ಗೋವಿಂದರಾಜು, ಮುಖಂಡರಾದ ಪಿ.ಪಟಾಲಪ್ಪ, ಬಾಲಕೃಷ್ಣ, ಎಂ.ಲಕ್ಷ್ಮಣ್, ವಿ.ಮುನಿರಾಜು, ರಂಗಸ್ವಾಮಿ, ನೆರಗನಹಳ್ಳಿ ಶ್ರೀನಿವಾಸ್, ರಾಜಣ್ಣ, ಸಂಘದ ಸಿಬ್ಬಂದಿಗಳಾದ ಕೆ.ರಮೇಶ್, ಕೆ.ಎಂ.ಸುಮ, ತಿಮ್ಮರಾಯಪ್ಪ, ಸರ್ವ ಸದಸ್ಯರು ಇದ್ದರು.
Be the first to comment