ಜಿಲ್ಲಾ ಸುದ್ದಿಗಳು
ಬಾಗಲಕೋಟೆ : ಪ್ರಸಕ್ತ ಹಂಗಾಮಿನ ಕಬ್ಬು ದರ ನಿಗಧಿಪಡಿಸುವ ಕುರಿತಂತೆ ರವಿವಾರ ನಡೆಸಲಾದ ಸಭೆಯಲ್ಲಿ ರೈತರು ಮತ್ತು ಸಕ್ಕರೆ ಕಾರ್ಖಾನೆ ಮಾಲಿಕರ ಮದ್ಯ ಒಮ್ಮತಕ್ಕೆ ಬಾರದ ಪರಿಣಾಮ ಕಾನೂನು ಸುವ್ಯವಸ್ಥೆಯಲ್ಲಿ ತೊಂದರೆಯಾದಲ್ಲಿ ತಪ್ಪಿತಸ್ಥರ ವಿರುದ್ದ ನಿರ್ಧಾಕ್ಷಣ್ಯವಾಗಿ ಕ್ರಮ ಜರುಗಿಸಲಾಗುವುದೆಂದು ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ಎಚ್ಚರಿಕೆ ನೀಡಿದರು.
ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಕಳೆದ 3 ಸಭೆಗಳಲ್ಲಿ ರೈತರಿಗೆ ನೀಡಬೇಕಾದ ಕಬ್ಬಿನ ಬಾಕಿ ಹಾಗೂ ಪ್ರಸಕ್ತ ಹಂಗಾಮಿನ ಬೆಲೆ ನಿಗಧಿ ಕುರಿತಂತೆ ಕಾರ್ಖಾನೆ ಮಾಲಿಕರು ಮತ್ತು ರೈತರ ನಡುಗೆ ಸುಧೀಘ್ರವಾಗಿ ಚರ್ಚೆ ನಡೆಸಲಾದರೂ ಸಹಿತ ಯಾವುದೇ ಒಮ್ಮತದ ನಿರ್ಧಾರಕ್ಕೆ ಬರಲಿಲ್ಲ. ಕಾರ್ಖಾನೆ ಮಾಲಿಕರು ಮತ್ತು ರೈತರನ್ನು ಕರೆದು ತಮ್ಮ ತಮ್ಮ ಸಮಸ್ಯೆಗಳನ್ನು ತಾವೇ ಬಗೆಹಿರಿಸಿಕೊಳ್ಳತಕ್ಕದ್ದು. ಈ ಸಂದರ್ಭದಲ್ಲಿ ಕಾನೂನು ಸುವ್ಯವಸ್ಥೆಗೆ ತೊಂದರೆ ಕ್ರಮ ಜರುಗಿಸಲಾಗುವುದೆಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಕಳೆದ 3 ಸಭೆಗಳಲ್ಲಿ ಕಬ್ಬಿನ ದರ ನಿಗಧಿ ಸಭೆಯಲ್ಲಿ ಸಮೀರವಾಡಿಯ ಗೋದಾವರಿ ಶುಗರ್ಸ ನವರು ಕಳೆದ 2020-21ನೇ ಸಾಲಿನ ಹಂಗಾಮಿಗೆ ಹೆಚ್ಚುವರಿಯಾಗಿ 120 ರೂ.ಗಳನ್ನು ಹಾಗೂ ಪ್ರಸಕ್ತ ಹಂಗಾಮಿಗೆ ಎಚ್ & ಟಿ ಕಡಿತಗೊಳಿಸಿದ ಪ್ರತಿ ಮೆಟ್ರಿಕ್ ಟನ್‍ಗೆ 2700 ರೂ.ಗಳನ್ನು ಮಾತ್ರ ನೀಡುವುದಾಗಿ ಲಿಖಿತವಾಗಿ ತಿಳಿಸಿದರೆ, ಇಂಡಿಯನ್ ಕೇನ್ ಫವರ್ ಲಿಮಿಟೆಡ್‍ನವರು 2020-21ನೇ ಸಾಲಿನ ಹೆಚ್ಚುವರಿ 100 ರೂ. ಹಾಗೂ ಪ್ರಸಕ್ತ ಹಂಗಾಮಿಗೆ ಎಚ್ & ಟಿ ಕಡಿತಗೊಳಿಸಿ ಪ್ರತಿ ಮೆಟ್ರಿಕ್ ಟನ್‍ಗೆ 2700 ರೂ. ಕೊಡುವುದಾಗಿ ತಿಳಿಸಿದರು ಎಂದರು.
ಇನ್ನು ಕೆಲವು ಕಾರ್ಖಾನೆಯವರು ಘೋಷಣೆ ಮಾಡಲಿಲ್ಲ. ಈ ಹಿನ್ನಲೆಯಲ್ಲಿ ರೈತರು ಪ್ರಸಕ್ತ ಹಂಗಾಮಿಗೆ ಎಫ್‍ಆರ್‍ಪಿ ದರದಲ್ಲಿ ಮೊದಲ ಕಂತಾಗಿ ನೀಡಲು ಒತ್ತಾಯಿಸಿದರು. ಇದಕ್ಕೆ ಒಮ್ಮತ ಬಾರದ ಹಿನ್ನಲೆಯಲ್ಲಿ ಕಾರ್ಖಾನೆ ಮಾಲಿಕರು ಮತ್ತು ರೈತರು ಕೂಡಿಕೊಂಡು ತಾವೇ ಒಂದು ಇತ್ಯರ್ಥಕ್ಕೆ ಬರಲು ತಿಳಿಸಿದರು. ಈ ಮದ್ಯೆ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆಗೆ ದಕ್ಕೆ ಉಂಟಾಗಲು ಅವಕಾಶ ನೀಡಬಾರದೆಂದು ಎಚ್ಚರಿಕೆ ನೀಡಿದರು.
ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ ಜಗಲಾಸರ, ಆಹಾರ ಇಲಾಖೆಯ ಜಂಟಿ ನಿರ್ದೇಶಕ ಶ್ರೀಶೈಲ ಕಂಕಣವಾಡಿ, ಉಪವಿಭಾಗಾಧಿಕಾರಿಗಳಾದ ಎಂ.ಗಂಗಪ್ಪ, ಸಿದ್ದು ಹುಲ್ಲೊಳ್ಳಿ, ವಿವಿಧ ಕಾರ್ಖಾನೆಯ ಪ್ರತಿನಿಧಿಗಳಾದ ಬಾಲಚಂದ್ರ ಭಕ್ಷಿ, ಸತೀಶ ಕಣಬೂರ, ಸಂಗಮೇಶ ನಿರಾಣಿ, ರೈತ ಮುಖಂಡರಾದ ಬಸವಂತಪ್ಪ ಕಾಂಬಳೆ, ಕೆ.ಟಿ.ಪಾಟೀಲ, ಸುಭಾಷ ಕೋರಡ್ಡಿ, ರಾಚಪ್ಪ ಕಲ್ಲೊಳ್ಳಿ, ಯಂಕಪ್ಪ ಮಳಲಿ, ರಾಮನಗೌಡ ಪಾಟೀಲ, ಮುತ್ತಪ್ಪ ಕೋಮಾರ ಸೇರಿದಂತೆ ಇತರರು ಉಪಸ್ಥಿತರಿದ್ದರು.
Be the first to comment