ಜಿಲ್ಲಾ ಸುದ್ದಿಗಳು
ಮುದ್ದೇಬಿಹಾಳ:
ಕೊರೊನಾ ಸಂದಿಗ್ಧ ಪರಿಸ್ಥಿತಿಯಲ್ಲಿ ಏ.5 ರಂದು ಡಾ.ಬಾಬು ಜಗಜೀವನರಾಮ ಅವರ 114ನೇ ಜಯಂತ್ಯೋತ್ಸವವನ್ನು ಸರಕಾರದ ನಿಯಮಾವಳಿ ಪ್ರಕಾರವೇ ಮಾಡಲಾಗುತ್ತದೆ. ಆದರೆ ಪಟ್ಟಣದಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಂಡು ಮೆರವಣಿಗೆ ಮಾಡುವುದಕ್ಕೆ ಅನುಮತಿ ನೀಡಬೇಕು ಎಂದು ದಲಿತ ಮುಖಂಡ ಹರೀಶ ನಾಟಿಕಾರ ಪದಾಧಿಕಾರಿಗಳು ಪ್ರಭಾರ ತಹಸೀಲ್ದಾರ ಅನೀಲಕುಮಾರ ಢವಳಗಿ ಅವರಿಗೆ ಮನವಿ ಮಾಡಿದರು.
ಪಟ್ಟಣದ ತಹಸೀಲ್ದಾರ ಕಚೇರಿಯಲ್ಲಿ ಗುರುವಾರ ನಡೆಸಲಾದ ಡಾ.ಬಾಬು ಜಗಜೀವನರಾಮ ಅವರ 114ನೇ ಜಯಂತ್ಯೋತ್ಸವ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಜಗಜೀವನರಾಮ ಅವರ ಬಗ್ಗೆ ಇಂದಿನ ಯುವಪೀಳಿಗೆಯವರಿಗೆ ಸಮಗ್ರ ಮಾಹಿತಿ ಇಲ್ಲದಂತಾಗಿದೆ. ಜಗಜೀವನರಾಮ ಅವರು ದೇಶ ಕಂಡ ಅಪ್ರತಿಮ ನಾಯಕರು. ಇಂತಹ ವ್ಯಕ್ತಿಯ ಜಯಂತ್ಯೋತ್ಸವವನ್ನು ಇಂದಿನ ಸಂದಿಗ್ಧ ಪರಿಸ್ಥಿತಿಯಲ್ಲಿ ಅದ್ದೂರಿಯಿಂದ ಮಾಡಲು ಆಗುವುದಿಲ್ಲ. ಆದರೆ ಸಾಮಾಜಿಕ ಅಂತರ ಸೇರಿದಂತೆ ಕೊರೊನಾ ನಿಯಮಾವಳಿ ಹೊರಡಿಸಿರುವ ಸರಕಾರದ ಆದೇಶದಂತೆ ಆಚರಣೆ ಮಾಡಲು ಅನುಮತಿ ನೀಡಬೇಕು ಎಂದು ಅವರು ಮನವಿ ಮಾಡಿದರು.
ಭಹಿರಂಗ ಸಭೆ ಇಲ್ಲಾ:
ಈಗಾಗಲೇ ರಾಜ್ಯಾದ್ಯಂತ ಸರಕಾರ ಕಟ್ಟುನಿಟ್ಟಿನ ಆದೇಶವನ್ನು ಹೊರಡಿಸಿದ್ದು ಯಜಂತ್ಯೋತ್ಸವದಲ್ಲಿ ಭಹಿರಂಗ ಸಭೆಗಳನ್ನು ಹಮ್ಮಿಕೊಳ್ಳುವುದು ಹಾಗೂ ಹೆಚ್ಚಿನ ಜನಸಂಖ್ಯೆಯಲ್ಲಿ ಭಾಗಿಯಾಗುವುದು ಅಪರಾಧವಾಗಿದ್ದು ತಾಲೂಕಿನಲ್ಲಿ ಭಹಿರಂಗ ಸಭೆಗಳನ್ನು ಮಾಡಬಾರದು. ತಾಲೂಕಿನ ಎಲ್ಲ ಸರಕಾರಿ ಕಚೇರಿ ಸೇರಿದಂತೆ ಅನುದಾನಿತ ಹಾಗೂ ಅನುದಾನ ರಹಿತ ಶಾಲೆಗಳಲ್ಲಿ ಜಯಂತ್ಯೋತ್ಸವ ಆಚರಣೆಯನ್ನು ಕಡ್ಡಾಯವಾಗಿ ಮಾಡಬೇಕು. ನಂತರ ಪ್ರತಿಯೊಂದು ಇಲಾಖೆ ಅಧಿಕಾರಿಗಳು ಜಗಜೀವನರಾಮ ಅವರ ವೃತ್ತಕ್ಕೆ ಆಗಮಿಸಿ ಪೂಜೆ ಸಲ್ಲಿಸಿ ತಹಸಿಲ್ದಾರ ಕಛೇರಿಯಲ್ಲಿ ನಡೆಯುವ ಆಚರಣೆಯಲ್ಲಿ ಭಾಗವಹಿಸಬೇಕು. ತಪ್ಪಿದ್ದಲ್ಲಿ ಕಾನೂನು ರೀತಿಯಾಗಿ ಕ್ರಮಕ್ಕೆ ಮುಂದಾಗಬೇಕಾಗುತ್ತದೆ ಎಂದು ಪ್ರಭಾರ ತಹಸೀಲ್ದಾರ ಅನೀಲಕುಮಾರ ಢವಳಗಿ ತಿಳಿಸಿದರು.
ವೃತ್ತವನ್ನು ಅಲಂಕರಿಸಿ:
ಮುದ್ದೇಬಿಹಾಳ ಪಟ್ಟಣದಲ್ಲಿ ಡಾ.ಬಾಬು ಜಗಜೀವನರಾಮ ಅವರ ವೃತ್ತವನ್ನು ಹಲವು ವರ್ಷಗಳ ಹಿಂದೆ ನಿರ್ಮಿಸಲಾಗಿದೆ. ಆದರೆ ವೃತ್ತವನ್ನು ಸ್ವಚ್ಚಗೊಳಿಸಿ ಜಗಜೀವನರಾಮ ಅವರ ಭಾವಚಿತ್ರವನ್ನು ನೂತನವಾಗಿಸಬೇಕು ಎಂದು ದಲಿತ ಮುಖಂಡರು ಆಗ್ರಹಿಸಿದರು.
ಬಸ್ ನಿಲ್ದಾನವನ್ನು ಗುಣಮಟ್ಟವಾಗಿಸಿ:
ಮುದ್ದೇಬಿಹಾಳ ಪಟ್ಟಣದ ಆಲಮಟ್ಟಿ ರಸ್ತೆಯಲ್ಲಿ ಜಿಪಂ ವತಿಯಂದ ನಿರ್ಮಿಸಿರುವ ಡಾ.ಬಾಬು ಜಗಜೀವನರಾಮ ಅವರ ಬಸ್ ನಿಲ್ದಾಣವು ಸಂಪೂರ್ಣ ಕಳಪೆಯಿಂದ ಮಾಡಿದ್ದು ಕೂಡಲೇ ಅದನ್ನು ಸರಿಪಡಿಸಿ ಅದನ್ನು ಸುಸಜ್ಜಿತವನ್ನಾಗಿಸಬೇಕು ಎಂದು ದಲಿತ ಮುಖಂಡರು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಸಿಪಿಐ ಆನಂದ ವಾಗ್ಮೋರೆ, ಪಿಎಸ್‌ಐ ಎಂ.ಬಿ. ಬಿರಾದಾರ, ಕುಡಿಯುವ ನೀರು ಸರಬರಾಜು ಅಧಿಕಾರಿ ಜೆ.ಪಿ.ಶೆಟ್ಟಿ, ಸಿಡಿಪಿಓ ಅಧಿಕಾರಿ ಸಾವಿತ್ರಿ ಗುಗ್ಗರಿ, ಅರಣ್ಯಾಧಿಕಾರಿ ಸಂತೋಷ ಅಜೂರ, ಲೋಕೋಪಯೋಗಿ ಇಲಾಖೆ ಅಧಿಕಾರಿ ಆರ್.ಎಂ.ಹುಂಡೇಕಾರ, ಮೀನುಗಾರಿಕೆ ಇಲಾಖೆ ಅಧಿಕಾರಿ ಬಿ.ಎಸ್.ಲಮಾಣಿ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಉಮೇಶ ಜಾಧವ, ದಲಿತ ಸಂಘಟನೆ ಮುಖಂಡರಾದ ಡಿ.ಬಿ.ಮುದೂರ, ಸಿದ್ದು ಪರಶುರಾಮ ನಾಲತವಾಡ, ಎಸ್.ಆರ್.ಕಟ್ಟಿಮನಿ, ರೇವಣೆಪ್ಪ ಚಲವಾದಿ, ಪ್ರಕಾಶ ಚಲವಾದಿ, ದೇವರಾಜ ಹಂಗರಗಿ ಸೇರಿದಂತೆ ಎಲ್ಲ ಇಲಾಖೆ ಅಧಿಕಾರಿಗಳು ಇದ್ದರು.
Be the first to comment