ಜಿಲ್ಲಾ ಸುದ್ದಿಗಳು
ವಿಜಯಪುರ:
ಮಹಿಳೆಯರು ತಾವು ಕೆಲಸ ಮಾಡುವ ಸ್ಥಳಗಳಲ್ಲಿ ಆಗಲಿ, ಹೊರಗೆ ಆಗಲಿ ತಮ್ಮ ಮೇಲೆ ನಡೆಯುವ ಶೋಷಣೆ, ಒತ್ತಡಗಳಿಗೆ ಮೌನವಹಿಸದೇ ಆಯಾ ಸಮಯದಲ್ಲಿಯೇ ತಕ್ಕ ಉತ್ತರ ಕೊಡಬೇಕೆಂದು ನಗರದ ಎ.ಪಿ.ಎಂ.ಸಿ. ಪೊಲೀಸ್ ಠಾಣೆಯ ಪಿಎಸ್ಸೈ ಪ್ರೇಮಾ ಕೂಚಬಾಳ ಹೇಳಿದರು.
ಅವರು ನಗರದ ಪ್ರಧಾನ ಅಂಚೆ ಕಚೇರಿಯಲ್ಲಿ ನಡೆದ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಮಾತನಾಡಿದರು. ಈಗ ಮಹಿಳೆ ಮೊದಲಿನಂತೆ ಮನೆಯಲ್ಲಿಯೇ ಕೆಲಸ ಮಾಡುತ್ತ ಕೂಡುವಂತಿಲ್ಲ, ಮನೆಯಿಂದ ಹೊರಬಂದು ಕರ್ತವ್ಯ ನಿರ್ವಹಣೆಯ ವೇಳೆ ಲೈಂಗಿಕ ಕಿರುಕಳ ಸೇರಿದಂತೆ ಒತ್ತಡಗಳನ್ನು ಎದುರಿಸಬೇಕಾಗುತ್ತದೆ. ನಾವು ಕಿರುಕಳಗಳನ್ನು ಮೌನವಾಗಿ ಸಹಿಸುತ್ತ ಹೋದರೆ ನಮ್ಮ ಮೇಲೆ ತೊಂದರೆ, ದಬ್ಬಾಳಿಕೆ ಹೆಚ್ಚುತ್ತ ಹೋಗುತ್ತದೆ, ಅದನ್ನು ಆರಂಭದಲ್ಲಿಯೇ ಹೊಸಕಿ ಹಾಕುವುದು ಧೈರ್ಯವಂತರ ಲಕ್ಷಣ ಎಂದವರು ಹೇಳಿದರು.
ಕಾರ್ಯಕ್ರಮದಲ್ಲಿ ಅತಿಥಿಯಾಗಿದ್ದ ವಿಜಯಪುರ ಜಿಲ್ಲಾ ಅಂಚೆ ಅಧೀಕ್ಷಕ ಕೆ.ರಘುನಾಥಸ್ವಾಮಿ ಮಾತನಾಡಿ, ಮಹಿಳೆಯರು ಎಲ್ಲ ರಂಗಗಳಲ್ಲಿ ಸಶಕ್ತರಾಗಿ ಮತ್ತು ಯಶಸ್ವಿಯಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು. ಅಂಚೆ ಇಲಾಖೆಯ ಸಶಕ್ತೀಕರಣದಲ್ಲಿ ಮಹಿಳೆಯ ಪಾತ್ರ ವಿಷಯದ ಮೇಲೆ ಹಮ್ಮಿಕೊಂಡಿದ್ದ ಪ್ರಬಂಧ ಸ್ಪರ್ಧೆಯಲ್ಲಿ ಚಿತ್ರಾ ಬಿರಾದಾರ ಪ್ರಥಮ, ಭಾರತಿ ಇಂಗಳೆ ದ್ವಿತೀಯ ಸ್ಥಾನ ಗಳಿಸಿದರು. ಮ್ಯೂಸಿಕಲ ಚೇರ್ ಸ್ಪರ್ಧೆಯಲ್ಲಿ ಎಸ್.ಬಿ.ರೇವಡಿಹಾಳ ಪ್ರಥಮ, ಸುಧಾರಾಣಿ ಹಾರೋಲೆ ದ್ವಿತೀಯ ಸ್ಥಾನ ಪಡೆದರು. ವೇದಿಕೆಯಲ್ಲಿ ಸಹಾಯಕ ಅಂಚೆ ಅಧೀಕ್ಷಕ ರೂಪೇಶ ದುರ್ಗೆ, ಪೋಸ್ಟ ಮಾಸ್ಟರ್ ಎಸ್.ಕೆ. ಜಿನ್ನದ ಸೇರಿದಂತೆ ಎ.ಸಿ.ಶಿಳ್ಳೀನ, ಆಯೇಶಾ ಭಾಗವಾನ, ಕೊಪ್ಪದ, ಸುಮನ್ ಹುದ್ದಾರ, ಶ್ರೀದೇವಿ ಅಲದಿ, ಮಹಾದೇವಿ ಹಡಪದ ಸೇರಿದಂತೆ ಅಂಚೆ ಕಚೇರಿಯ ಮಹಿಳಾ ನೌಕರರು ಪಾಲ್ಗೊಂಡಿದ್ದರು. ಮಲ್ಲಮ್ಮ ಪಾಟೀಲ ಪ್ರಾರ್ಥಿಸಿದರು. ಶ್ರೀದೇವಿ ಅಲದಿ ಸ್ವಾಗತಿಸಿದರು. ಜಯಶ್ರೀ ಎಸ್.ಇಂಗಳೆ ನಿರೂಪಿಸಿದರು. ಮಹಾದೇವಿ ಹಡಪದ ವಂದಿಸಿದರು.
Be the first to comment